ಕುಂಭಕರ್ಣ

ರಾವಣನ ತಮ್ಮ, ವಿಭೀಷಣನ ಅಣ್ಣ, ವಿಶ್ರವಸ ಮತ್ತು ಕೈಕಸಿಯರ ಮಗ. ಬಲಿ ಚಕ್ರವರ್ತಿಯ ಮಗಳು ವೃತ್ರಜ್ವಾಲೆಯ ಪತಿ. ಕುಂಭ, ನಿಕುಂಭರು ಮಕ್ಕಳು, ಬೃಹದ್ಗಾತ್ರದ ಕಿವಿಗಳನ್ನು ಪಡಿದಿದ್ದರಿಂದ ಕುಂಭಕರ್ಣನೆಂದು ಕರೆಯಲಾಯಿತು. ಈತ ಹುಟ್ಟುವಾಗಲೇ ಭಯಂಕರ ರೂಪದಿಂದಿದ್ದು ಸಾವಿರಾರು ಮಂದಿಯನ್ನು ನುಂಗಿದ. ಇದನ್ನು ಕೇಳಿದ ಇಂದ್ರ ಐರಾವತವನ್ನೇರಿ ಬಂದು ವಜ್ರಾಯುಧದಿಂದ ಹೊಡೆದ. ಐರಾವತದ ಒಂದು ದಂತವನ್ನು ಮುರಿದುಕೊಂಡು ಯುದ್ಧ ಮಾಡುತ್ತಿದ್ದ ಕುಂಭಕರ್ಣನ ಸಾಹಸವನ್ನು ಕಂಡು ಇಂದ್ರ ಪಲಾಯನ ಮಾಡಿ ಬ್ರಹ್ಮನನ್ನು ಮೊರೆ ಹೊಕ್ಕ. ಬ್ರಹ್ಮ ಗಾಢನಿದ್ರೆಯಲ್ಲಿರುವಂತೆ ಕುಂಭಕರ್ಣನಿಗೆ ಶಾಪ ನೀಡಿದ. ಇದನ್ನು ತಿಳಿದ ಕುಂಭಕರ್ಣನ ತಂದೆ ಬ್ರಹ್ಮನ ಬಳಿಗೆ ಹೋಗಿ ಬೇಡಿದಾಗ ವರ್ಷದಲ್ಲಿ ಒಂದು ದಿನ ಎಚ್ಚರದಿಂದಿರಲೆಂದು ಅನುಗ್ರಹಿಸಿದ. ಅನಂತರ ಕುಂಭಕರ್ಣ ಗೋಕರ್ಣದಲ್ಲಿ ನಿರ್ದೇವತ್ವ ಪಡೆಯಲು ಬ್ರಹ್ಮನನ್ನು ಕುರಿತು ತಪವನ್ನಾಚರಿಸಿದ. ಇದರಿಂದ ಹೆದರಿದ ದೇವತೆಗಳಗೆ ಬ್ರಹ್ಮ ಅಭಯ ನೀಡಿ, ಅವನ ಬುದ್ಧಿಗೆ ಮರಳು ಹಿಡಿಸುವಂತೆ ಸರಸ್ವತಿಗೆ ಹೇಳಿದ. ಮರುಳುಗೊಂಡ ಕುಂಭಕರ್ಣ ನಿರ್ದೇವತ್ವದ ಬದಲಿಗೆ ನಿದ್ರೆಯನ್ನು ಬೇಡಿದ. ರಾವಣ ಕುಬೇರನನ್ನು ಗೆದ್ದು ಲಂಕಾನಗರವನ್ನು ಸ್ವಾಧೀನ ಪಡಿಸಿಕೊಳ್ಳುವವರೆಗೂ ಈತ ಶ್ಲೇಷ್ಮಾತಕವನದಲ್ಲಿ ವಾಸವಾಗಿದ್ದ. ರಾವಣ ಸೀತೆಯನ್ನು ಅಪಹರಿಸಿ ತಂದ ಬಳಿಕ, ಹನುಮಂತ ಲಂಕೆಯನ್ನು ಸುಟ್ಟಾಗ ಎಚ್ಚೆತ್ತ ಕುಂಭಕರ್ಣ ರಾವಣನ ನೀಚಕೃತ್ಯಕ್ಕೆ ಮರುಗಿ ಸೀತೆಯನ್ನು ರಾಮನಿಗೆ ಒಪ್ಪಿಸಿ ಶರಣು ಹೋಗೆಂದು ಬುದ್ಧಿ ಹೇಳಿದ. ಕುಂಭಕರ್ಣನ ಬುದ್ಧಿವಾದ ರಾವಣನಿಗೆ ರುಚಿಸಲಿಲ್ಲ. ರಾಮರಾವಣರ ಯುದ್ಧ ಪ್ರಾರಂಭವಾಯಿತು. ರಾವಣನ ಸೇನಾಪರಿವಾರವೆಲ್ಲವೂ ಹತವಾಯಿತು. ಕುಂಭಕರ್ಣನ ಇಬ್ಬರು ಮಕ್ಕಳೂ ಮಡಿದರು. ವಿಧಿಯಿಲ್ಲದೆ ಬಹು ಪ್ರಯಾಸದಿಂದ ಕುಂಭಕರ್ಣನನ್ನು ಎಚ್ಚರಗೊಳಿಸಲಾಯಿತು. ಎಚ್ಚರಗೊಂಡ ಕುಂಭಕರ್ಣ ಭಯಂಕರ ರೀತಿಯಲ್ಲಿ ಯುದ್ಧಮಾಡಿ ರಾಮನಿಂದ ಹತನಾದ.           

 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ